Mangalashtaka

By Shri Kesava Rao Tadipatri


Rangoli by Smt.Padmini Rao

ಮಂಗಳಾಷ್ಟಕ

ಶ್ರೀ ರಾಜರಾಜೆಶ್ವರ-ಯತಿಪುಂಗವ-ವಿರಚಿತ ಮಂಗಳಾಷ್ಟಕದ ಮೊದಲ ಶ್ಲೋಕಕ್ಕೆ ಕನ್ನಡೀಕರಣ ಮಾಡುವ ಒಂದು ಚಿರುಪ್ರಯತ್ನ. ದೇವರನ್ನು ಕೊಂಡಾಡಬೇಕೆನ್ನುವ ಕಳಕಳಿ ಮಾತ್ರ.

ಸುರಮಣಿಯು ರಮಣಿ ಯಾದಲು
ಸುರಮಣಿ ಸೂನನು ನೆನೆದರೆ ಸುರಮಣಿ ಗಂಗಾ |
ವರಮಣಿ ಮೊಮ್ಮಗ ಶಯನವು
ಉರಗಮಣಿ ವಿಹಂಗಮಣಿಯು ತುರಗವು ನೋಡಲ್ ||

ಸುರರಾವನ ಚರಣಂಗಳ
ಪರದೈವವೆ ಎಂಪೊರೆಯೆನ್ ಮೊರೆ ಹೊಕ್ಕುವರೋ |
ಹರಿಗೀ ಜಗವೇ ಮನೆಯೋ
ನಿರುತವು ಮಂಗಳ ಕೊಡುವನು ನಿಖಿಲಾತ್ಮನಹೋ ||1||

ವಿವರಣೆ:

ಮಣಿ ಯೆಂದರೇ ಶ್ರೇಷ್ಟತೆಯನ್ನು ತಿಳಿಸುವ ಶಬ್ದ ಎನ್ನುವುದು ಜಗದ್ವಿದಿತವಾದ ವಿಷಯ.
ರಮಣಿ ಯೆಂದರೇ ಸುಂದರ ಸ್ತ್ರೀ ಯೆಂದರಿವೆಲ್ಲರಿಗೆ ಇದೆ. ರಮಣಿ ಯೆಂದರೇ ಪತ್ನಿ ಯೆಂದು ಅರ್ಥವಿದೆ.

ಇಲ್ಲಿ ಸುರಮಣಿ ಎನ್ನುವ ಶಬ್ದ ನಾಲ್ಕು ಅರ್ಥಗಳಲ್ಲಿ ನಾಲ್ಕು ವಿಧವಾಗಿ ಪ್ರಯೋಗಿಸಲ್ಪಟ್ಟಿತು.

ಸು + ರಮಣಿ ಯೆಂದರೇ ಎಲ್ಲ ರಮಣಿಯರಲ್ಲಿಯೂ ಶ್ರೇಷ್ಟಲಾದ ಲಕ್ಷ್ಮೀ ದೇವಿ. "ಸು" ಎನ್ನುವುದು  ಶೋಭನ-ವಾಚಕ ಶಬ್ದ. ಭಗವಂತನೊಬ್ಬನೇ ಚತುರ್ವಿಧ ನಾಶರಹಿತ. ಸ್ವರೂಪನಾಶ, ದೇಹನಾಶ, ದುಃಖಪ್ರಾಪ್ತಿ ಎನ್ನುವ ಮೂರು ದೋಷಗಳು ಇಲ್ಲದವಳು ಲಕ್ಷ್ಮಿ ಮಾತ್ರ. ಈಶಾದನ್ಯತ್ರ (ಯೆಂದರೇ ಭಗವಂತನ ಬಿಟ್ಟು ಇನ್ನಿತರ ವಿಷಯಗಳಲ್ಲಿ), ಆಲೋಚನೆ ಮಾಡದೇನೇ ಸಾರ್ವತ್ರಿಕ ಜ್ಞಾನ ಉಳ್ಳವಳು. ಅಪೂರ್ಣತಾ ಎನ್ನುವ ಒಂದು ದೋಷಮಾತ್ರ  ಭಗವದಪೆಕ್ಷಯಾಇದ್ದವಳು. ಅಂಥಾ ಲಕ್ಷ್ಮಿಯು ಹರಿಯನ್ನು ಪರಿಗ್ರಹಿಸಿ, ನಿತ್ಯ ಆವಿಯೋಗಿನಿಯಾಗಿ ನೆಲೆಸಿದ್ದಾಲೆ.

"ಸುರಮಣಿ ರಮಣಿ ಯಾದಲು".

ಸುರ + ಮಣಿ ಯೆಂದರೇ ಸುರರೊಳಗೆ ಉತ್ತಮ. ಜೀವೊತ್ತಮ - ಕಮಲಭವನೂ ಹೌದು, ಮುಖ್ಯಪ್ರಾಣನೂ ಹೌದು. ಸೂನ ಯೆಂದರೇ ಮಗ. ನಾವು ನೆನೆದು ನೋಡಿದರೆ ಕಮಲಭವನು ಸೂನನು ಯೆಂದರೇ ಮಗನು. ಮುಖ್ಯಪ್ರಾಣನೂ ಮಗನೇ.

"ಸುರಮಣಿ ಸೂನನು ನೆನೆದರೆ".

"ಸು + ರಮಣಿ + ಗಂಗಾ + ವರಮಣಿ" ಎನ್ನುವುದು ಒಂದು ಸಮಸ್ತಪದ. ಇದು ಬಹುವ್ರೀಹಿ ಸಮಾಸ.

ಸು + ರಮಣಿ ಯೆಂದರೇ ಗಂಗಾದೇವಿಯು ಸರ್ವೊತ್ತಮಳು ಆಗದಿದ್ದರೂ, ಎಲ್ಲ ನದಿ ಅಭಿಮಾನಿ ದೇವತೆಗಳಲ್ಲಿ ಶ್ರೇಷ್ಟಲಾಗಿದ್ದಾಳೆ. ಅನಂತನ ಅಂಗುಷ್ಟದಿಂದ ಆವಿರ್ಭವಿಸಿ, ತ್ರಿಲೋಕಪಾವನಿಯೆಂದು ಖ್ಯಾತಿ ಪಡೆದವಳು. ಇಂಥಾ ಪವಿತ್ರನಾರಿ ಗಂಗೆ ಶ್ರೆಷ್ಟವಾದ ಆಭರಣವಾಗಿ ಉಳ್ಳವನು ರುದ್ರದೇವರು. 

ಗಂಗಾದೇವಿ ಆ ಹೆಸರಿನಿಂದ ಯಾಕೆ ಪ್ರಸಿದ್ಧಳಾದಳು? "ಗಮ್" ಯೆಂದರೆ "ದುಃಖವನ್ನು" ಗ = ಅಪಗಾಮಯತಿ = ಹೋಗಳಾಡಿಸುವಳಾದ್ದರಿಂದ.  ಅದು ಹೇಗೆ ಯೆಂದರೇ, ದುಃಖಗಳಿಗೆ ಕಾರಣ ನಮ್ಮ ಪಾಪಗಳು. ಗಂಗೆ ಮಿಂದರೇ ಪಾಪಮಲವು ಹಿಂಗುವುದು. ದುಃಖ ತೊಲಗುವುದು. ಆದ್ದರಿಂದ ಗಂಗೆ ಯಾದಲು. 

ಇದು ಸ್ಪಷ್ಟವಾಗಿ ಹೊಳೆಯುವ, ಎಲ್ಲರಿಗೆ ತಿಳಿದ ಅರ್ಥವು. ಇಲ್ಲಿ ಇನ್ನೊಂದು ವಿಶೇಷಾರ್ಥವನ್ನು ನೋಡಬಹುದು. ಪಾಪಗಳು ಮಾಡಿಬಿಟ್ಟೆವು. ಪಾಪಗಳಿಂದ ಆಧಿ, ವ್ಯಾಧಿಗಳು ಸಂಭವಿಸಿದೆವು. ಅವುಗಳಿಂದ ದುಃಖವೂ ಒದಗಿತು. ಆಧಿಗಳೆಂದರೇ ಮನೋರೋಗಗಳು. ವ್ಯಾಧಿಗಳೆಂದರೇ ಶಾರೀರಕ ರೋಗಗಳು. ಓಷಧೀಪತಿಯಾಗಿ ಚಂದ್ರನು ನಮ್ಮ ಶಾರೀರಕ ರೋಗಗಳನ್ನು ದೂರ ಮಾಡತಾನೆ. ಮನೋ ಅಭಿಮಾನಿಯಾಗಿ ಮನೋಜಾಡ್ಯಗಳನ್ನು ಅಳಿಯುತ್ತಾನೆ. ಹೀಗೆ ದುಃಖ ಪರಿಹಾರಕನಾದ್ದರಿಂದ ಅವನು ಗಂಗ ಶಬ್ದವಾಚ್ಯನೇ. 

ಆದರೆ ಗಂಗಾ ಯೆಂದು ದೀರ್ಘವು ಹೇಗೆ ಸಲ್ಲುತ್ತದೆ ಯೆಂದರೇ -
"ಸುರ + ಮಣಿ + ಗಂಗ + ಅವರಮಣಿ". ಚಂದ್ರನು ಸರ್ವ ದೇವ ಶ್ರೇಷ್ಟನಾಗದಿದ್ದರೂ, ಹನ್ನೆರಡನೇ ಕಕ್ಷ್ಯಕ್ಕಿಂತ ಕೆಳಗಿರುವವರಕ್ಕಿಂತ ಶ್ರೇಷ್ಟನಾದ್ದರಿಂದ, ಆ ಸುರರಿಗೆ ಮಣಿಪ್ರಾಯನಾಗಿದ್ದಾನೆ. ಆದರೆ "ಅವರಮಣಿ" ಯೆಂದರೇ  ಶ್ರೇಷ್ಟವಾಗದಮಣಿಯಾಯಿತಲ್ಲವೇ ಯೆಂದು ಸಂಶಯ ಬಂದರೇ - "ವರಮಣಿಃ ತಸ್ಮಾದನ್ಯಃ ನಾಸ್ತಿ ಇತಿ" (ರುದ್ರನಿಗೆ ಇವನಿಕ್ಕಿಂತ ಶ್ರೇಷ್ಟವಾದ ಮಣಿ/ಆಭರಣ ಮತ್ತಿಲ್ಲ). ಹೀಗೆ ಅರ್ಥೈಸುವುದು ಸರಿಯೇ ಯೆಂದು ಸಂಶಯ ಬಂದರೇ, ಅದಕ್ಕೆ ಸಮಾಧಾನವಿದೆ. 

ರಾಯರ ಸ್ತೋತ್ರದಲ್ಲಿ "ಯೋ.ಅನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್" ಎನ್ನುವುದರಲ್ಲಿ "ಅನುತ್ತಮಂ" ಯೆಂದರೇ ಯಥಾಯೋಗ್ಯವಾಗಿ, ಇದಕ್ಕಿಂತ ಉತ್ತಮವಾದ ರಾಯರ ಸ್ತೋತ್ರವಿಲ್ಲ ಯೆಂದೇ ಅರ್ಥೈಸುವುದಲ್ಲವೇ? ಸರಿ ವಿಗ್ರಹವಾಕ್ಯ ಒಪ್ಪಿದರೂ ವಿಷಯ ಒಪ್ಪುತ್ತದೆಯೋ ಯೆಂದರೇ, ಒಪ್ಪುತ್ತದೆ.

ಗಂಗೆ ಇಪ್ಪತ್ತನೇ ಕಕ್ಷ್ಯದವಳಾದರೇ, ಚಂದ್ರ ಹನ್ನೆರಡನೇ ಕಕ್ಷ್ಯೆ. ಹೀಗೆ ರುದ್ರ ನಾಗಭೂಷಣ, ಗಂಗಾಭೂಷಣನಾದರೂ, ಅವನು ಚಂದ್ರವಿಭೂಷಣ (ಚಂದ್ರನೇ ವಿಶೇಷವಾದ ಭೂಷಣವಾಗಿ ಉಳ್ಳವನು). ಆ ರುದ್ರನು ಶ್ರೀ ಹರಿಗೆ ಮೊಮ್ಮಗ.

"ಸು + ರಮಣಿ + ಗಂಗಾ + ವರಮಣಿ ಮೊಮ್ಮಗ".
"ಸುರ + ಮಣಿ + ಗಂಗ + ಅವರಮಣಿ ಮೊಮ್ಮಗ".

ಉರಗಮಣಿ ಯೆಂದರೇ ಸರ್ಪ ಶ್ರೇಷ್ಟನಾದ ಶೇಷನು. ಉರಗ ಎನ್ನುವ ಶಬ್ದಕ್ಕೆ ಒಂದು ವಿಶೇಷಾರ್ಥವನ್ನು ಮಾಡಬಹುದು. ಉರಸಾ (ಹೃದಾ) = ಪ್ರೀತಿಯಿಂದ; ಗಮಯತಿ = ದೇವತಗಳಿಗೆ ಜ್ಞಾನವನ್ನು ಕೊಟ್ಟು - ಸುರಗುರುವಾಗಿ "ಉರರೀಕರಿಸುವನು"(ಒಪ್ಪಿಕೆಯನ್ನು ಕೊಡುವನು). ಶೇಷದೇವರು ಇಂದ್ರಾದಿ ದೇವತೆಗಳಿಗೆ  ಉಪದೇಶಕನೆನ್ನುವುದು ಪ್ರಸಿದ್ಧವೇ. ಆ ಶೇಷನೇ ಶ್ರೀ ಹರಿಗೆ ಪರ್ಯಂಕನಾದ .

"ಶಯನವು ಉರಗಮಣಿ".

"ತುರಗ", "ರಥ", ಇವು "ವಾಹನ" ವಾಚಕ ಶಬ್ದಗಳು. ವಿಹಂಗಮಣಿ ಯೆಂದರೇ ಖೇಚರರರಸ. ಗರುಡನೇ ತುರಗನಾದ. ಹಕ್ಕಿಗಳ ಮೇಲಾಳೇ ಅದ್ಭುತವಾಹನ.

"ವಿಹಂಗಮಣಿಯು ತುರಗವು ನೋಡಲ್"

ಸುರರೆಲ್ಲರೂ ಯಾವ ಶ್ರೀ ಹರಿಯ ಪದ ಕಮಲಗಳಿಗೆ
"ಹೇ ಪರಾತ್ಪರನೇ, ದೇವಾಧಿದೇವನೇ ನಮ್ಮೆಲ್ಲರನ್ನು ಕಾಪಾಡು" ಯೆಂದು ಸೇವಕಭಾವದಿಂದ ಮೊರೆ ಹೊಕ್ಕುತ್ತಿರುವರೋ, ಅಂಥಾ ಮೂರು ಲೋಕದ ಕುಟುಂಬಿಯಾದ ಆ ಶ್ರೀ ಹರಿಗೆ ಈ ಬ್ರಹ್ಮಾಂಡವೇ ಮನೆಯಾಗಿದೆ, ಶ್ರೇಷ್ಟಮಂದಿರವಾಗಿದೆ. ಅಂಥಾ ನಿಖಿಲಾತ್ಮನು, ಅಖಿಲಾತ್ಮನು, ಸಕಲಾತ್ಮನು, ಪರಮಾತ್ಮನು ನಿರಂತರ ಮಂಗಳ ನೀಡಲೆಂದು ಕೂಗಿ ಪ್ರಾರ್ಥಿಸೋ.


Comments